ಬಿಡದಿ ಟೌನ್ಶಿಪ್ ಯೋಜನೆ ಸಂಘರ್ಷ ಜೋರಾಗಿದೆ. ಇತ್ತೀಚೆಗೆ ಸರ್ವೆ ಮಾಡಲು ಬಂದಿದ್ದ ಜಿಬಿಎ ಅಧಿಕಾರಿಗಳಿಗೆ ಪ್ರತಿಭಟನಾನಿರತ ಮಹಿಳೆಯರು ಪೊರಕೆ ಏಟು ನೀಡಿದ್ದರು. ಕಲ್ಲು ತೂರಿ ಕಾರು ಜಖಂ ಗೊಳಿಸಿದ್ದರು. ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಸಿಎಂ ಡಿಕೆ ಶಿವಕುಮಾರ್ಗೆ ಪತ್ರ ಬರೆಯುವ ಮೂಲಕ ಯೋಜನೆ ಕೈಬಿಡುವಂತೆ ಆಗ್ರಹಿಸಿದ್ದಾರೆ. ಇಷ್ಟೆಲ್ಲಾ ವಿರೋಧದ ಮಧ್ಯೆ ಇದೀಗ ಸರ್ಕಾರ ಎರಡನೇ ಹಂತದ ಅಂತಿಮ ಅಧಿಸೂಚನೆ ಬಿಡುಗಡೆ ಮಾಡಿದೆ.ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎರಡನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಬಿಡದಿ ಹೋಬಳಿಯ ಪ್ರಮುಖ ಮೂರು ಗ್ರಾಮಗಳ ಒಟ್ಟು 2,550 ಎಕರೆ ಜಮೀನನ್ನು ಈ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಭೂಸ್ವಾಧೀನಕ್ಕೊಳಪಟ್ಟ ಗ್ರಾಮಗಳು ಮತ್ತು ವಿಸ್ತೀರ್ಣದ ವಿವರ
- ಕೆಜಿ ಗೊಲ್ಲರಪಾಳ್ಯ: ಒಟ್ಟು 315 ಎಕರೆ (ಇದರಲ್ಲಿ 5 ಎಕರೆ ಕರಾಬು ಜಮೀನು ಸೇರಿದೆ).
- ಬನ್ನಿಗಿರಿ ಗ್ರಾಮ: ಒಟ್ಟು 775 ಎಕರೆ 6 ಗುಂಟೆ (ಇದರಲ್ಲಿ 99 ಎಕರೆ ಕರಾಬು ಜಮೀನು ಸೇರಿದೆ).
- ಅರಳಾಳುಸಂದ್ರ: ಒಟ್ಟು 1,460 ಎಕರೆ 21 ಗುಂಟೆ (ಇದರಲ್ಲಿ 30 ಎಕರೆ ಕರಾಬು ಜಮೀನು ಸೇರಿದೆ).
ಯಾರ ಆಸ್ತಿಯನ್ನೂ ಬಲವಂತವಾಗಿ ತೆಗೆದುಕೊಳ್ಳಲ್ಲ: ಸಿಎಂ ಡಿಕೆ ಶಿವಕುಮಾರ್
ಇನ್ನು ಇತ್ತ ಬೆಂಗಳೂರಿನಲ್ಲಿ ಟೌನ್ಶಿಪ್ ಯೋಜನೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘‘ ಬಿಡದಿ ಟೌನ್ಶಿಪ್ ನನ್ನ ಕನಸಿನ ಯೋಜನೆ ಅಲ್ಲ. ಈ ಯೋಜನೆಗೆ ನಾನು ಪಿತಾಮಹ ಆಗಲು ಇಷ್ಟಪಡುವುದಿಲ್ಲ. ಯಾರ ಆಸ್ತಿಯನ್ನೂ ಬಲವಂತವಾಗಿ ತೆಗೆದುಕೊಳ್ಳಲ್ಲ. ಸ್ವಇಚ್ಛೆಯಿಂದ ರೈತರು ಕೊಟ್ಟರೆ ಮಾತ್ರ ಭೂಸ್ವಾಧೀನ ಮಾಡುತ್ತೇವೆ. ಜಮೀನು ಕೊಡುವಂತೆ ರೈತರಿಗೆ ನಾವು ಒತ್ತಾಯ ಮಾಡಲ್ಲ’’ ಎಂದು ಹೇಳಿದ್ದಾರೆ.

