ಮೂಡಿಗೆರೆ, ಜು.31:
ತಮಿಳುನಾಡಿಗೆ ಕಾವೇರಿ ನೀಡು ಬಿಡದಂತೆ ಒತ್ತಾಯಿಸಿ ಕರವೆ ಹಾಗೂ ರೈತ ಸಂಘದಿoದ ಪ್ರತಿಭಟನೆ

ಕಾವೇರಿ ನೀರು ತಮಿಳುನಾಡಿಗೆ ಬಿಡಬಾರದೆಂದು ಒತ್ತಾಯಿಸಿ ವಿವಿಧ ಸಂಘಟನೆ ಮುಖಂಡರು ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಡಿ.ಆರ್.ಪುಟ್ಟಸ್ವಾಮಿಗೌಡ ಮಾತನಾಡಿ, ಮಲೆನಾಡು ಭಾಗದಲ್ಲಿ ಈ ಬಾರಿ ನಿರೀಕ್ಷೆಗೆ ತಕ್ಕಂತೆ ಮಳೆಯಾಗಿಲ್ಲ. ಮಳೆಯಿಲ್ಲದೇ ಈಗಾಗಲೇ ತಾಲೂಕಿನಲ್ಲಿ ಹರಿಯುವ ನದಿಗಳು, ಜಲ ಮೂಲಗಳು ಬತ್ತಿ ಹೋಗಿವೆ. ಕೃಷಿ ಚಟುವಟಿಕೆ ನಡೆಸುವುದೇ ಕಷ್ಟವಾಗಿದೆ. ಇಂತಹ ಹೊತ್ತಲ್ಲಿ ರಾಜ್ಯದಲ್ಲಿಯೇ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದ್ದು, ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ತಮಿಳುನಾಡಿಗೆ ನೀರು ಬಿಡಬಾರದೆಂದು ಒತ್ತಾಯಿಸಿದರು.
ಕರವೆ ಅಧ್ಯಕ್ಷ ವಿನೋಧ್ಕುಮಾರ್ ಮಾತನಾಡಿ, ಈಗಾಗಲೇ 5000 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 1000ರಿಂದ 2000 ಮಿ.ಮೀ. ನಷ್ಟು ಮಾತ್ರ ಮಳೆಯಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಇಲ್ಲಿ ಹೆಚ್ಚುವರಿ ನೀರಿದ್ದರೆ ಎಷ್ಟು ಬೇಕಾದರೂ ಹೊರ ರಾಜ್ಯಕ್ಕೆ ಕೊಟ್ಟಿದ್ದರೂ ನಾವು ಕೇಳುತ್ತಿರಲಿಲ್ಲ. ಆದರೆ ಇಲ್ಲಿಯೇ ನೀರಿಲ್ಲ. ಇದ್ದ ನೀರನ್ನು ತಮಿಳುನಾಡಿಗೆ ಬಿಡುವುದು ಸರಿಯಲ್ಲ. ಇದನ್ನು ರಾಜ್ಯ ಸರಕಾರ ತಡೆ ಹಿಡಿಯದಿದ್ದರೆ ಮುಂದಿನ ದಿನ ಎಲ್ಲಾ ಸಂಘಟನೆ ಸೇರಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ್ಗೌಡ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವನಶ್ರೀ, ಮುಖಂಡರಾದ ರಮೇಶ್ ದಾರದಹಳ್ಳಿ, ಎಸ್.ಪಿ.ರಾಜು, ಎಚ್.ಎಸ್.ನಾಗೇಶ್ಗೌಡ, ಪೂರ್ಣೇಶ್ಗೌಡ, ಲಿಂಗೇಗೌಡ, ಎನ್.ಎಸ್.ರಾಮಚಂದ್ರೇಗೌಡ, ಎಚ್.ಬಿ.ಮಂಜುನಾಥ್, ಮೀನಾಕ್ಷಮ್ಮ ಮತ್ತಿತರರಿದ್ದರು.


