**ಟಾಟಾ ಪವರ್‌ಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡದಂತೆ ಆಗ್ರಹಿಸಿ ಮೂಡಿಗೆರೆಯಲ್ಲಿ ಸಾಂಕೇತಿಕ ಪ್ರತಿಭಟನೆ**
ಮೂಡಿಗೆರೆ, ಜೂನ್ 20: ಟಾಟಾ ಪವರ್ ಕಂಪನಿಯು ವಿದ್ಯುತ್ ವಿತರಣಾ ಪರವಾನಿಗೆಗಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (KERC) ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಅದನ್ನು ವಿರೋಧಿಸಿ ಮೂಡಿಗೆರೆ ಮೆಸ್ಕಾಂ ಉಪವಿಭಾಗದ ಕಚೇರಿ ಎದುರು ಕೆಪಿಟಿಸಿಎಲ್/ಎಸ್ಕಾಂ ನೌಕರರ ಸಂಘ, ಅಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರು ಸಂಯುಕ್ತವಾಗಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು, ಯಾವುದೇ ಕಾರಣಕ್ಕೂ ಟಾಟಾ ಪವರ್‌ಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಹಾಗೂ ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ಜಾರಿಗೊಳಿಸಬಾರದು ಎಂದು ಆಗ್ರಹಿಸಿದರು. ಸಾರ್ವಜನಿಕ ಹಿತಾಸಕ್ತಿ ಹಾಗೂ ಗ್ರಾಹಕರ ಸೇವೆಯ ದೃಷ್ಟಿಯಿಂದ ವಿದ್ಯುತ್ ವಿತರಣಾ ವ್ಯವಸ್ಥೆ ಸರ್ಕಾರಿ ವಲಯದಲ್ಲೇ ಮುಂದುವರಿಯಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಿತೇಂದ್ರ ಕುಮಾರ್ ಮಾತನಾಡಿ, ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣದಿಂದ ಸಾರ್ವಜನಿಕ ಸೇವೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಸರ್ಕಾರ ಹಾಗೂ ನಿಯಂತ್ರಣ ಆಯೋಗವು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಸುನಿಲ್, ಅನಿಲ್, ಧ್ರುವ, ಕಾರ್ಯದರ್ಶಿ ಕಿರಣ್, ಶಾಖಾಧಿಕಾರಿಗಳಾದ ರವಿಕುಮಾರ್, ಷಣ್ಮುಖ, ಮಂಜುನಾಥ್, ಜಾವೇದ್ ಹಾಗೂ ವಿದ್ಯುತ್ ಗುತ್ತಿಗೆದಾರರಾದ ಪಾಂಡು, ವಿನ್ಸಿ ಮತ್ತು ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು.

